ಹೊಸ ನಾಕ್ಷತ್ರಿಕ ಗ್ರಹವ್ಯೂಹಗಳು- 
	ನಮ್ಮ ಸೌರಮಂಡಲದಂತೆಯೇ ಇತರ ನಕ್ಷತ್ರಗಳನ್ನು ಪರಿಭ್ರಮಿಸುತ್ತಿರುವ ಗ್ರಹಗಳಿರಬಹುದು ಎಂಬ ಚಿಂತನೆ ಪುರಾತನವಾದುದಾಗಿದ್ದರೂ ದೂರದರ್ಶಕ ಮತ್ತು ರೋಹಿತದರ್ಶಕ ವಿಶ್ಲೇಷಣ ತಂತ್ರವಿದ್ಯೆ ವಿಕಸಿಸಿದ ಬಳಿಕ ಈ ಕುರಿತಾದ ವೈಜ್ಞಾನಿಕ ಅನ್ವೇಷಣೆ ಆರಂಭವಾಯಿತು. 51 ಪೆಗಸಿ ನಕ್ಷತ್ರವನ್ನು ಪರಿಭ್ರಮಿಸುತ್ತಿರುವ ಗ್ರಹವೇ ಪತ್ತೆಯಾದ (1995 ಅಕ್ಟೋಬರ್ 5) ಮೊದಲನೆಯ ನಾಕ್ಷತ್ರಿಕ ಗ್ರಹ. 2004ರ ಜೂನ್ ತನಕ 108 ಪ್ರಧಾನಶ್ರೇಢಿ ನಕ್ಷತ್ರಗಳಿಗೆ ಗ್ರಹವ್ಯೂಹಗಳಿರುವ (123 ಗ್ರಹಗಳು) ಸಂಗತಿ ಪತ್ತೆಯಾಗಿದೆ. ಈ ವ್ಯೂಹಗಳಲ್ಲಿ ಮಿಲಿಯಗಟ್ಟಳೆ ಧೂಮಕೇತುಗಳಿರುವುದೂ ಪತ್ತೆಯಾಗಿದೆ.

	ನಾಕ್ಷತ್ರಿಕ ಗ್ರಹಗಳನ್ನು ಪತ್ತೆಹಚ್ಚುವ ವಿಧಾನಗಳು: 1. ಪಲ್ಸಾರ್‍ಗಳಿಂದ ಬರುವ ಸ್ಪಂದಗಳ ಆವರ್ತಾವಧಿಯಲ್ಲಿ ಅಸಂಬದ್ಧತೆಯನ್ನು ನಿಖರವಾಗಿ ಗುರುತಿಸಿ ಅದರ ಕಾರಣವನ್ನು ಗಣಿಸಿ ನಿರ್ಧರಿಸುವ ಪಲ್ಸಾರ್ ಟೈಮಿಂಗ್ ವಿಧಾನ. ಪಲ್ಸಾರ್ ಪಿಎಸ್‍ಆರ್ 1257 + 12 ಅನ್ನು ಪರಿಭ್ರಮಿಸುತ್ತಿರುವ ಗ್ರಹ ಪತ್ತೆಯಾದದ್ದು (1993) ಈ ವಿಧಾನದಿಂದ. 2. ಪರಿಭ್ರಮಿಸುತ್ತಿರುವ ಗ್ರಹಗಳ ಪ್ರಭಾವದಿಂದಾಗಿ ನಕ್ಷತ್ರಗಳ ಚಲನೆಯಲ್ಲಿ ಉಂಟಾಗುವ ಸೂಕ್ಷ್ಮ ವ್ಯತ್ಯಯವನ್ನು ಅಳತೆ ಮಾಡುವ ಖಗೋಲಮಿತಿ (ಆಸ್ಟ್ರಾಮೆಟ್ರಿ) ವಿಧಾನ. 3.  ಡಾಪ್ಲರ್ ಪರಿಣಾಮದಿಂದ ನಕ್ಷತ್ರದ ರೋಹಿತರೇಖೆಗಳಲ್ಲಿ ಉಂಟಾಗುವ ವಿಸ್ಥಾಪನೆಯಿಂದ ನಕ್ಷತ್ರ ಚಲನೆಯ ವೇಗದಲ್ಲಿ ಆಗುವ ವ್ಯತ್ಯಯಗಳನ್ನು ನಿಗಮಿಸುವ ಅರೀಯ ವೇಗ ವಿಧಾನ. ಈ ವಿಧಾನಕ್ಕೆ ಡಾಪ್ಲರ್ ವಿಧಾನ ವಾಬ್‍ಲ್ ವಿಧಾನ ಎಂಬ ಹೆಸರುಗಳೂ ಇವೆ. 4. ದೂರದ ಹಿನ್ನೆಲೆ ನಕ್ಷತ್ರದಿಂದ ಬರುವ ಬೆಳಕನ್ನು ನಕ್ಷತ್ರ ಮತ್ತು ಅದರ ಗ್ರಹಗಳ ಗುರುತ್ವಕ್ಷೇತ್ರ ವರ್ಧಿಸುವುದಕ್ಕೆ ಗುರುತ್ವ ಸೂಕ್ಷ್ಮಮಸೂರೀಕರಣ (ಗ್ರ್ಯಾವಿಟೇಶನಲ್ ಮೈಕ್ರೋಲೆನ್ಸಿಂಗ್) ಪರಿಣಾಮ ಎಂದು ಹೆಸರು. ದೂರದ ನಕ್ಷತ್ರ ಮತ್ತು ವೀಕ್ಷಕನ ನಡುವೆ ನಕ್ಷತ್ರ ಮತ್ತು ಅದರ ಗ್ರಹಗಳು ದಾಟುವಾಗ ಈ ಪರಿಣಾಮವನ್ನು ಗುರುತಿಸುವ ವಿಧಾನ. 5. ಅತಿಥೇಯ ನಕ್ಷತ್ರದ ಮುಂದಿನಿಂದ ಅದರ ಗ್ರಹ ಹಾದು ಹೋಗುವಾಗ ಅದರ ನೆರಳನ್ನು ಗುರುತಿಸುವ ಸಂಕ್ರಮ (ಟ್ರ್ಯಾನ್ಸಿಟ್) ವಿಧಾನ. 6. ಅನೇಕ ನಾಕ್ಷತ್ರಿಕ ಗ್ರಹವ್ಯೂಹಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಆಕಾಶಧೂಳು (ಸ್ಪೇಸ್ ಡಸ್ಟ್) ಇರುತ್ತದೆ. ನಕ್ಷತ್ರದ ಸುತ್ತ ಬಿಲ್ಲೆಯಂತೆ ಗೋಚರಿಸುವ ಇದು ನಕ್ಷತ್ರದ ಬೆಳಕನ್ನು ಅಪಶೋಷಿಸಿ ಅತಿರಕ್ತ ವಿಕಿರಣವನ್ನು ಉತ್ಸರ್ಜಿಸುತ್ತದೆ. ಪರಿಭ್ರಮಿಸುತ್ತಿರುವ ಗ್ರಹಗಳ ಗುರುತ್ವ ಪರಿಣಾಮದಿಂದ ಉಂಟಾಗುವ ವಿಕೃತತೆಯ ಕುರಿತು ಅಮೂಲ್ಯ ಮಾಹಿತಿಯನ್ನು ಈ ಧೂಳಿನ ಮೋಡಗಳ ಅಧ್ಯಯನದಿಂದ ಪಡೆಯಬಹುದು.									
(ಎಸ್.ಎಚ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ